ಜಿಗ್ಗರ್ -
	ಬಟ್ಟೆಯನ್ನು ತೆರೆದ ಪನ್ನದಲ್ಲಿ ಬಣ್ಣ ಹಾಕಲು ಅಥವಾ ಚಲುವೆ ಮಾಡಲು ಉಪಯೋಗಿಸುವ ತ್ರಿಕೋಣಾಕಾರದ ಅತಿ ಸುಲಭರಚನೆಯ ಬಾನೆ. ಇದರಲ್ಲಿ 6 ಅಂಗುಲ ತ್ರಿಜ್ಯವುಳ್ಳ ಎರಡು ತಿರುಗು ದಿಂಡುಗಳಿವೆ. ಬಟ್ಟೆ ಒಂದು ದಿಂಡಿನಿಂದ ಕೊನೆಯಿಲ್ಲದ ಹಗ್ಗದ ರೂಪದಲ್ಲಿ ಹಾಯ್ದು ಬಣ್ಣದ ದ್ರಾವಣದಲ್ಲಿ ಹೋಗಿ ಇನ್ನೊಂದು ದಿಂಡಿನ ಮೇಲೆ, ಸುತ್ತಿಕೊಳ್ಳುತ್ತದೆ. ಶಾಖಗೊಳಿಸಲು ಬೇಕಾದ ಆವಿಯನ್ನು ಮತ್ತು ಸಾಕಷ್ಟು ನೀರನ್ನು ಒದಗಿಸಲು ಮತ್ತು ದ್ರಾವಣವನ್ನು ಹೊರಹಾಕಲು ಇದರಲ್ಲಿ ಅನುಕೂಲತೆಗಳುಂಟು. ಒಂದು ದಿಂಡು ಖಾಲಿಯಾದಾಗ ಇನ್ನೊಂದು ದಿಂಡು ಬಟ್ಟೆಯನ್ನು ಬಿಡುವಂತೆ ವಾಪಸು ತಿರುಗುವ ಏರ್ಪಾಡಿದೆ. ಬಟ್ಟೆಗೆ ಪೂರ್ಣವಾಗಿ ಬಣ್ಣ ಹಾಕಿ, ಬೇಕಾದ ಛಾಯೆ ಬರುವ ತನಕ ಈ ಕ್ರಿಯೆ ಪದೇ ಪದೇ ನಡೆಯುತ್ತಿರುತ್ತದೆ. ಜಿಗ್ಗರನ್ನು ಮುಖ್ಯವಾಗಿ ಏಕವರ್ಣಕಾರಕಕ್ಕೆ ತೆರೆದ ಪನ್ನದಲ್ಲಿ ಉಪಯೋಗಿಸುತ್ತಾರೆ. ಬಣ್ಣ ಹಾಕಿದ ಬಳಿಕ ಬಟ್ಟೆಯನ್ನು ಹಾಗೆಯೇ ತೊಳೆಯಲಾಗುವುದು. ಜಿಗ್ಗರಿನ ಬಳಕೆ ಇತರ ಅನೇಕ ವಿವಿಧ ಕ್ರಿಯೆಗಳಲ್ಲೂ ಉಂಟು. ಹಾಸು ಹೊಕ್ಕುಗಳನ್ನು ವ್ಯತ್ಯಸ್ತಗೊಳಿಸಿದೆ ಜಿಗ್ಗರಿನಲ್ಲಿ ರೇಷ್ಮೆ , ಕೃತಕ ರೇಷ್ಮೆ ಮತ್ತು ಮಿಶ್ರಬಟ್ಟೆಗಳಿಗೆ ಸುಲಭವಾಗಿ ಬಣ್ಣ ಹಾಕಬಹುದು.

	ಸಾಮಾನ್ಯ ಜಿಗ್ಗರಿನ ಕೆಲವು ಅನುಕೂಲತೆಗಳು ಹೀಗಿವೆ :

     1. ಜಿಗ್ಗರಿನಲ್ಲಿ ಬಟ್ಟೆ ಹಾಯುವಾಗ ಹಾಸುಹೊಕ್ಕುಗಳಲ್ಲಿ ಬಿಗಿತವುಂಟಾಗುವುದಿಲ್ಲ. 
2. ಎರಡೂ ಭಾಗದ ದಿಂಡಿನ ಮೇಲಿರುವ ಬಟ್ಟೆಗಳು ದ್ರಾವಣದಲ್ಲಿ ಒಂದೇ ಸ್ಥಿರವೇಗದಲ್ಲಿ ಚಲಿಸುತ್ತವೆ. 
3. ದ್ರಾವಣದೊಳಗೆ ಪ್ರವೇಶಿಸುವ ಬಟ್ಟೆಯ ಭಾಗವನ್ನು ಸ್ವಯಂಚಾಲಿತಗೊಳಿಸುವುದರಿಂದ ಯಂತ್ರದಲ್ಲಿ ಅತೀತ ವೇಗವಾಗಲಿ ಬೀಳು ಬಿಗಿತವಾಗಲಿ ಇರುವುದಿಲ್ಲ. 
4. ಕೆಲಸದಲ್ಲಿ ಬಹಳ ಉಳಿತಾಯವಿರುವ ಕಾರಣ ಒಬ್ಬ ಕೆಲಸಗಾರ 3-4 ಯಂತ್ರಗಳನ್ನು ನೋಡಿಕೊಳ್ಳಬಹುದು. 
5. ಯಂತ್ರದ ರಚನೆ ಬಹಳ ಸುಲಭವಾಗಿರುವುದರಿಂದ ಇದನ್ನು ನೋಡಿ ಕೊಳ್ಳಲು ಕಷ್ಟವಿಲ್ಲ. 
6. ಬಣ್ಣ ಮಾಡುವಷ್ಟೇ ತೃಪ್ತಿಕರವಾಗಿ ಇದರಲ್ಲಿ ಚಲುವೆಯನ್ನೂ ಮಾಡಬಹುದು.
7. ಪರಿಪೂರ್ಣವಾಗಿ ಬಣ್ಣ ಅತ್ಯಂತ ಸಮರಸವಾಗಿ ಸೇರುತ್ತದೆ.
8. ಯಂತ್ರದಲ್ಲಿ ಎರಡೇ ದಿಂಡುಗಳಿರುವುದರಿಂದ ಬಟ್ಟೆಯಲ್ಲಿಯೂ ಅಂಚುಗಳಲ್ಲಿಯೂ ಮಡಿಕೆಗಳು ಆಗುವುದಿಲ್ಲ. ಅಲ್ಲದೇ ಬಟ್ಟೆ ಪೂರ್ಣ ನೇರ ಕ್ರಮದಲ್ಲಿ ಚಲಿಸುವುದರಿಂದ ಅಂಚುಗಳಲ್ಲಿ ಬಿರುಕು ತಲೆದೋರುವುದಿಲ್ಲ.			(ಕೆ.ಬಿ.ಸಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ